VEERASHAIVA
ವೀರಶೈವ ಧರ್ಮ
ವಾಗರ್ಥಾವಿವ ಸಂತೃಕ ವಾಗರ್ಥಪ್ರತಿಪತ್ತಯೇ।
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರ್॥
ವೀರಶೈವ ಧರ್ಮ ಅತ್ಯಂತ ಪ್ರಾಚೀನ. ಇದರ ಇತಿಹಾಸ ಮತ್ತು ಪರಂಪರೆ ಅಪೂರ್ವ, ಸಕಲ ಜೀವಾತ್ಮರಿಗೆ ಸದಾ ಲೇಸನ್ನೇ ಬಯಸಿದ ಧರ್ಮ ತಾನೊಬ್ಬನೇ ಬದುಕಿ ಬಾಳಬೇಕೆಂಬ ಸ್ವಾರ್ಥ ಸಂಕುಚಿತ ಮನೋಭಾವನೆಗಳು ಇಲ್ಲಿಲ್ಲ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಶ್ರೇಷ್ಠವೆಂದು ಸಾರಿದೆ. ಗಂಡು ಹೆಣ್ಣು, ಉಚ್ಚನೀಚ, ಬಡವ ಬಲ್ಲಿದ ಎಂಬ ಭೇದವಿಲ್ಲದೇ ಎಲ್ಲರಿಗೂ ಧಾರ್ಮಿಕ ಸಂಸ್ಕಾರ ಸದ್ವಿಚಾರಗಳನ್ನು ಕೊಟ್ಟ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ.
ವೀರಶೈವ ಧರ್ಮಕ್ಕೆ ಸಂವಿಧಾನ, ಆಚಾರ ಸಂಹಿತೆ ಮತ್ತು ಸಿದ್ಧಾಂತಗಳಿವೆ. ಅಷ್ಟಾವರಣದೇ ಅಂಗವಾಗಿ ಪಂಚಾಚಾರವೇ
ಪ್ರಾಣವಾಗಿ ಷಟ್ ಸ್ಥಲಗಳೇ ಆತ್ಮವಾಗಿರುವ ವೀರಶೈವ ಧರ್ಮ ಸಂಸ್ಕೃತಿಯನ್ನು ಶಿವಾಗಮಗಳಲ್ಲಿ ಕಾಣಬಹುದು. ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ
ಸಿದ್ಧಾಂತಾ ಮಹಾತಂತೇ ಕಾಮಿಕಾ ಶಿವೋದಿತೇ
ನಿರ್ದಿಷ್ಟಮುತ್ತರೇ ಭಾಗೇ ವೀರಶೈವ ಮತಂ ಪರಂ
ಎಂದು ಸಾರಿದೆ. ಕಾಮಿಕಾದಿ ವಾತುಲಾಂತವಾದ ಇಪತ್ತೆಂಟು ಶಿವಾಗಮಗಳ ಉತ್ತರ ಭಾಗದಲ್ಲಿ ವೀರಶೈವ ಧರ್ಮದ ಹಿರಿಮೆಯನ್ನು ಕಾಣಬಹುದು. ಐದು ಸಾವಿರ ವರುಷಗಳ ಇತಿಹಾಸವುಳ್ಳ ವೀರಶೈವ ಧರ್ಮದಲ್ಲಿ ಜಾತಿಯತೆ, ಸ್ತ್ರೀ ಪುರುಷ ಅಸಮಾನತೆ, ಮೂಢನಂಬಿಕೆ ಕಂದಾಚಾರಗಳನ್ನು ನಿರಾಕರಿಸಿ, ಸರ್ವ ಸಮಾನತೆಯನ್ನು ಸಾರುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ.
ಅಗಸ್ಯ, ದಧೀಚಿ, ವ್ಯಾಸ, ಸಾನಂದ, ದೂರ್ವಾಸ ಮಹರ್ಷಿಗಳು ಶಿವಾದೈತ ತತ್ವ ಸಿದ್ಧಾಂತಗಳನ್ನು ಪರಿಪಾಲಿಸಿ ಪಾವನರಾದರು. ಶಿವಾಗಮಗಳು, ಸಿದ್ಧಾಂತ ಶಿಖಾಮಣಿ, ಕ್ರಿಯಾಸಾರ, ಶ್ರೀಕರಭಾಷ್ಯ, ಶಿವಾ ತಮಂಜರಿ ಮೊದಲ್ಗೊಂಡು ಹಲವಾರು ಅಮೂಲ್ಯ ಗ್ರಂಥಗಳು ವೀರಶೈವ ಧರ್ಮದ ಪಾವಿತ್ರ್ಯತೆಯನ್ನು ಹೆಚ್ಚಿಸಿವೆ. ಕಾಯಕ ಮತ್ತು ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ. ಅಂಗ ಅವಗುಣಗಳನ್ನು ನೀಗಿ ಲಿಂಗಗುಣ ಸಂಪನ್ನರನ್ನಾಗಿ ಮಾಡಿದ ಕೀರ್ತಿ ಇದರದು. ದೇಹವನ್ನೇ ದೇವಾಲಯ ಮಾಡಿ ಗುರುಕೊಟ್ಟ ಇಷ್ಟಲಿಂಗವೇ ಆರಾಧ್ಯ ದೈವವೆಂದು ಪೂಜಿಸಿದ ಧರ್ಮ ವೀರಶೈವವಾಗಿದೆ.
ವೀರಶೈವ ಧರ್ಮವು ಜಾತಿ ಜಂಜಡಗಳ ಬೇರು ಕಿತ್ತು ಸಾಮರಸ್ಯದ ಸಂದೇಶ ನೀಡಿದೆ. ಜೀವ ಶಿವನಾಗುವ, ಅಂಗ ಲಿಂಗವಾಗುವ, ಭವಿ ಭಕ್ತನಾಗುವ ಪದಾರ್ಥ ಪ್ರಸಾದವನ್ನಾಗಿಸುವ, ಕರ್ಮ ಧರ್ಮವನ್ನಾಗಿಸುವ, ಜಲನೆಲ ತೀರ್ಥಕ್ಷೇತ್ರಗಳೆಂದು ಸಾರಿದ ವಿಶೇಷತೆಯನ್ನು ಈ ಧರ್ಮದಲ್ಲಿ ಕಾಣಬಹುದು. ಜ್ಞಾನ ಕರ್ಮ ಸಮುಚ್ಛಯದಿಂದ ಕೂಡಿದ ವೀರಶೈವ ಧರ್ಮದಲ್ಲಿ ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಸ್ಥಾವರಕ್ಕಿಂತ ಜಂಗಮಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದೆ.
Phone
082662 50424
VISIT
6 am to 8 pm
info@rambhapuripeetha.org
Address
Rambhapuri Mutt Road, Narasimharajapura, Taluka, Balehonnur, Karnataka 577112