b

ಪಂಚಪೀಠಗಳು

ಭಾರತ ಮಣ್ಯಭೂಮಿಯಲ್ಲಿ ಯಾವುದೇ ಧರ್ಮದ ಹುಟ್ಟಿನ ಮೂಲ ಉದ್ದೇಶ ಆಯಾ ಜನಸಮುದಾಯದ ಸಂಸ್ಕೃತಿಯನ್ನು ವಿಕಾಸಗೊಳಿಸುವುದೇ ಆಗಿದೆಯೇ ಹೊರತು ವಿಕಾರಗೊಳಿಸುವುದಲ್ಲ. ಆದರ್ಶವನ್ನು ಧರ್ಮ ಹೇಳಿದರೆ, ಬದುಕು ಹೀಗಿದೆಯೆಂಬ ವಾಸ್ತವವನ್ನು ಸಂಸ್ಕೃತಿ ತಿಳಿಸುತ್ತದೆ. ಮಾನವ ಜೀವನದ ಜೀವಾಳ ಧರ್ಮ, ನಿಜವಾದ ಆಚರಣೆ ಧರ್ಮವೆಂದು ಕರೆಯಿಸಿಕೊಳ್ಳುತ್ತದೆ. ಇಹ ಮತ್ತು ಪರದಲ್ಲಿ ಸಿದ್ಧಿಯನ್ನಿಡುವುದೇ ಧರ್ಮ, ಆಧ್ಯಾತ್ಮ ಪ್ರವೃತ್ತಿ, ಸನ್ಮಾರ್ಗ ನಡತೆ ಧರ್ಮ ಸಾಧನೆಯ ಅಡಿಗಲ್ಲು, ಅಂತೆಯೇ “ಧರ್ಮಂ ಚರ’ ಎಂದು ಸಾರಿದೆ ಉಪನಿಷತ್ತು.

ಧರ್ಮದಿಂದ ದೂರವಾದ ಅರ್ಥ, ಕಾಮನೆಗಳು ಊರ್ಜಿತಗೊಳ್ಳಲಾರವು. ಇವು ಧರ್ಮದ ಚೌಕಟ್ಟಿನಲ್ಲಿ ಬೆಳೆದಾಗ ನಿಜವಾದ ಶ್ರೇಯಸ್ಸು ಪ್ರಾಪ್ತವಾಗುತ್ತದೆ. ಬದುಕನ್ನು ತಿದ್ದುವ, ಬಾಳನ್ನು ಹಸನುಗೊಳಿಸುವ, ಜೀವನ ಪಾವನಗೊಳಿಸುವ ಕೆಲಸ ಧರ್ಮದ್ದು. ಇಂತಹ ಗುಣಾದರ್ಶಗಳಿರುವ ಧರ್ಮ ಯಾರಿಗೆ ಬೇಡ, ಅಹಿಸಾಂದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿದ ಹಿರಿಮೆ ವೀರಶೈವದ್ದು.

ಕುರುಡನಿಗೂ ಮುನ್ನಡೆಯಲು ಊರುಗೋಲು ಬೇಕು. ಅದಿಲ್ಲದೇ ಆತ ಮುನ್ನಡೆಯಲಾರ. ಗುರುವಿನ ಅಂತರಾತ್ಮದ ಸೂಕ್ಷ್ಮ ಸಂವೇದನಾಶೀಲ ಬಲದಿಂದ ಕುರುಡನನ್ನೂ ಮುನ್ನಡೆಸುವುದೇ ಗುರುವಿನ ಕರುಣಾಮೃತ, ಅದರಂತೆ ಬದುಕಿನ ಭವಸಾಗರ ದಾಟಲು ಗುರುಬೋಧಾಮೃತದ ಬೆಳಕು ಬೇಕೇ ಬೇಕು. ಇದನ್ನು ಅರಿಯುವುದಕ್ಕಾಗಿಯೇ ವೀರಶೈವ ಧರ್ಮ ಸಿದ್ಧಾಂತವು ಸಾಧನೆಯಲ್ಲಿ ದೈತವನ್ನು ಅಂತ್ಯದಲ್ಲಿ ಅದ್ಭತವನ್ನು ಸಾರುತ್ತದೆ. ಜ್ಞಾನ ಮತ್ತು ಕ್ರಿಯೆಗಳ ಆಚರಣೆಯಿಂದ ಜೀವನದ ಉನ್ನತಿ ಸಾಧ್ಯವೆಂದು ಸಾರಿದ ಶ್ರೇಯಸ್ಸು ವೀರಶೈವ ಧರ್ಮಕ್ಕೆ ಸಲ್ಲುತ್ತದೆ.

ಬಹು ಪ್ರಾಚೀನವಾದ ವೀರಶೈವ ಧರ್ಮವು ಇತಿಹಾಸ ಪ್ರಸಿದ್ಧವಾಗಿದೆ. ಶ್ರೀ ಜಗದಾದಿ ಜಗದ್ಗುರು ಪಂಚಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಉತ್ಕೃಷ್ಟ ಸ್ಥಾನಕ್ಕೇರಿಸಿದ್ದಾರೆ. ಭಕ್ತಿ-ಜ್ಞಾನ ಕ್ರಿಯೆಗಳ ಸಮೂಹದಂತಿರುವ ವೀರಶೈವ ಧರ್ಮವು, ಉನ್ನತ ವಿಚಾರಗಳನ್ನು ಹೊಂದಿದೆ. ಇಂತಹ ಅತ್ಯಮೂಲ್ಯವಾದ ಧರ್ಮವನ್ನು ನಾಡಿಗೆ ಕೊಟ್ಟ ಹೆಗ್ಗಳಿಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ. ಆದುದರಿಂದ ವೀರಶೈವ ಧಾರ್ಮಿಕ-ದಾರ್ಶನಿಕ ಇತಿಹಾಸದಲ್ಲಿ ಪಂಚಾಚಾರ್ಯರಿಗೆ ಪ್ರಥಮ ಸ್ಥಾನವಿದೆ.

ವೀರಶೈವ ಧರ್ಮವು ಲೋಕದೊಡೆಯ, ಕ್ರಿಯಾಕರ್ತ, ಲಯಕರ್ತ. ಕೈಲಾಸಪತಿ, ಗಿರಿಜಾಪತಿ, ಗಜಚರ್ಮಾಂಬರಧರನಾದ ಪರಶಿವನಿಗೆ ಪಂಚಮುಖಗಳೆಂದು ಒಪ್ಪಿಕೊಳ್ಳುತ್ತದೆ. ಅವುಗಳೆಂದರೆ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಹೀಗೆ ಈ ಐದೂ ಮುಖಗಳಲ್ಲಿ ಒಂದೊಂದು ಮುಖದಿಂದ, ಒಂದೊಂದು ಯುಗದಲ್ಲಿ ಪಂಚಾಚಾರ್ಯರು ಬೇರೆ ಬೇರೆ ಸುನಾಮಗಳಿಂದ ಅವತರಿಸಿದರೆಂದು ಒಪ್ಪಿಕೊಳ್ಳುತ್ತವೆ. ಲಿಂಗಮುಖರಾಗಿ ಉದ್ಭವಿಸಿದ ಆಚಾರ್ಯರು ಜಂಗಮ ರೂಪಾಗಿ ಜಗದ ಜಂಜಡವನ್ನು ಕಳೆದಿರುವರು. ಅವರ ಪರಮ ಪಂಚಪೀಠಗಳ ಪ್ರಾಪ್ತ ಪ್ರಾಚೀನತೆಯಿಂದ ಸುಪ್ತ ಪ್ರಸ್ತುತವರೆಗಿನ ಚಾರಿತ್ರ್ಯವನ್ನು ಇಲ್ಲಿ ಸಂಕ್ಷಿಪ್ತವಾಗಿ ಅವಲೋಕಿಸಬಹುದಾಗಿದೆ. 

ಪರಶಿವನಾದೇಶದಂತೆ ಆತನ ಪಂಚಮುಖಗಳಿಂದ ಆವೀರ್ಭವಿಸಿದ ಆದಿ. ಆಚಾರ್ಯರು ಭೂಲೋಕದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಪ್ರಕಟಗೊಂಡರೆಂಬುದರ ಬಗ್ಗೆ ಶಿವಾಗಮಗಳಲ್ಲಿ ಉಕ್ತವಾಗಿರುವುದನ್ನು ಕಾಣಬಹುದಾಗಿದೆ.

ಶಿವನ ಪ್ರಥಮ ಮುಖವಾದ ಸದ್ಯೋಜಾತ ಮುಖದಿಂದ ಪ್ರಾದುರ್ಭವಿಸಿದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ತ್ರಿಲಿಂಗದೇಶವಾದ ಕೋಲನುಪಾಕ (ಕೊಲ್ಲಿಪಾಕಿ) ಕ್ಷೇತ್ರದ ಶ್ರೀ ಸೋಮನಾಥ ಲಿಂಗದಲ್ಲಿ ಅವತರಿಸಿ ಕರ್ಣಾಟಕದ ಪಚ್ಚೆಯ ಪ್ರದೇಶವಾದ ಬಾಳೆಹೊನ್ನೂರಿನಲ್ಲಿ “ವೀರಸಿಂಹಾಸನ ಮಹಾಸಂಸ್ಥಾನಪೀಠವನ್ನು ತಮ್ಮ ಸಿದ್ಧಾಂತದ ಹರವನ್ನು ಕ್ರಿಯಾಶೀಲಗೊಳಿಸಲು ಸ್ಥಾಪಿಸಿದರು. ದ್ವಿತೀಯ ಮುಖವಾದ ವಾಮದೇವ ಮುಖದಿಂದ ಉದಯರಾದ ಶ್ರೀ ಜಗದ್ಗುರು ದಾರುಕಾಚಾರ್ಯರು ಭುವಿಯಲ್ಲಿ ಮಧ್ಯಪ್ರದೇಶದ ಪ್ರಕೃತಿಯ ಮಡಿಲಲ್ಲಿ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿ ಅವತರಿಸಿ ಉಜ್ಜಯಿನಿಯಲ್ಲಿ, ಕಾಲಾನಂತರದಲ್ಲಿ ಕರ್ನಾಟಕದ ಉಜೈನಿಯಲ್ಲಿ “ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನಪೀಠವನ್ನು ಸ್ಥಾಪಿಸಿ ಕ್ರಿಯಾಕ್ಷೇತ್ರವನ್ನಾಗಿಸಿಕೊಂಡರು. ತೃತೀಯ ಮುಖವಾದ ಅಘೋರ ಮುಖದಿಂದ ಉದಯರಾದ ಶ್ರೀ ಜಗದ್ಗುರು ಘಂಟಾಕರ್ಣಾಚಾರ್ಯರು ಆಂಧ್ರಪ್ರದೇಶದ ಬೆಂಗಾಡಿನಲ್ಲೂ ಎಳಕು ಬೀರಿ ದ್ರಾಕ್ಷಾರಾಮ ಕ್ಷೇತ್ರದ ಶ್ರೀ ರಾಮನಾಥ ಲಿಂಗದಲ್ಲಿ ಅವತರಿಸಿ ಹಿಮಾಲಯದ ದೇವಭೂಮಿಯಲ್ಲಿ, ಇಂದಿನ ಉತ್ತರಖಂಡದ ಕೇದಾರ ಕ್ಷೇತ್ರದಲ್ಲಿ “ವೈರಾಗ್ಯಸಿಂಹಾಸನ ಮಹಾಸಂಸ್ಥಾನಪೀಠ”ವನ್ನು ಸಂಸ್ಥಾಪಿಸಿದರು. ಚತುರ್ಥ ಮುಖವಾದ ತತ್ಪುರುಷ ಮುಖದಿಂದ ಉದಯರಾದ ಶ್ರೀ ಜಗದ್ಗುರು ದೇನುಕರ್ಣಾಚಾರ್ಯರು ಸುಧಾಕುಂಡ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಲಿಂಗದಲ್ಲಿ ಅವತರಿಸಿ ಆಂಧ್ರ ಪ್ರದೇಶದ ಶ್ರೀಶೈಲ ಸುಕ್ಷೇತ್ರದಲ್ಲಿ “ಸೂರ್ಯಸಿಂಹಾಸನ ಮಹಾಸಂಸ್ಥಾನಪೀಠವನ್ನು ಸ್ಥಾಪಿಸಿದರು. ಪಂಚಮ ಮುಖವಾದ ಈಶಾನ ಮುಖದಿಂದ ಉದಯರಾದ ಶ್ರೀ ಜಗದ್ಗುರು ವಿಶ್ವಕರ್ಣಾಚಾರ್ಯರು ಉತ್ತರಪ್ರದೇಶದ ಕಾಶೀ ಕ್ಷೇತ್ರದ ಶ್ರೀ ವಿಶ್ವನಾಥ ಲಿಂಗದಲ್ಲಿ ಅವತರಿಸಿ, ಅಲ್ಲಿಯೇ “ಜ್ಞಾನಸಿಂಹಾಸನ ಮಹಾಸಂಸ್ಥಾನಪೀಠ”ವನ್ನು ಸ್ಥಾಪಿಸಿದರು. ಶ್ರೀ ಜಗದ್ಗುರು ಪಂಚಾಚಾರ್ಯರ ಉದ್ಭವದ ವೃತ್ತಾಂತವನ್ನು ಶಿವನು ಶಿವೆಗೆ ತಿಳಿಸಿದನೆಂಬ ವಿಷಯವನ್ನು ಸ್ವಯಂಭುವಾಗಮದಲ್ಲಿ ತಿಳಿಸಲಾಗಿದೆ. ವೀರಶೈವ ಧರ್ಮದ ಆದಿ ಆಚಾರ್ಯರಲ್ಲಿ ಪ್ರಥಮಾಚಾರ್ಯರಾದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಮುನಿಶ್ರೇಷ್ಠ ಅಗಸ್ಯರಿಗೆ ಧರ್ಮದ ಸಾರವನ್ನೆಲ್ಲ ಬೋಧಿಸಿ, ದೀಕ್ಷೆ ನೀಡಿ ಉದ್ಧರಿಸಿರುವರು. ಈ ವೃತ್ತಾಂತವನ್ನೆಲ್ಲ ಶ್ರೀ ಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಪರಮಪಾವನವಾದ ಪವಿತ್ರ ಪರಮೋತ್ಕೃಷ್ಟ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ರಚಿಸಿದರು. ಇದುವೇ ಇಂದು ವೀರಶೈವ ಧರ್ಮದ ಗ್ರಂಥವಾಗಿರುವುದು.

ಸಿದ್ಧಾಂತಾಖ್ಯೆ ಮಹಾತಂತ್ರೆ ಕಾಮಿಕಾದೆ ಶಿವೋದಿತೇ |

ನಿರ್ದಿಷ್ಟಮುತ್ತರ ಭಾಗೇ ವೀರಶೈವ ಮತಂ ಪರಂ ॥

ಎನ್ನುವಲ್ಲಿ ‘ಸಿದ್ಧಾಂತ’ ಶಬ್ದದಿಂದ ಇಪ್ಪತ್ತೆಂಟು ಶಿವಾಗಮಗಳಲ್ಲಿ ವೀರಶೈವ ಧರ್ಮದ ತತ್ವತ್ರಯಗಳು ಆಗಮಗಳಿಗೆ ಅಷ್ಟೇ ಅಲ್ಲದೇ, ವೇದಗಳಿಗೂ ಸಂಬಂಧಿಸಿದವುಗಳಾಗಿದ್ದು

ಜೀವ ಶಿವನಾಗುವ, ಅಂಗ ಲಿಂಗವಾಗುವ, ಅವಿವೇಕಿ ವಿವೇಕಿಯಾಗುವ, ಅಜ್ಞಾನಿ ಸುಜ್ಞಾನಿಯಾಗುವ ಬಗೆಯನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತವೆ. ವೀರಶೈವ ಧರ್ಮ ಬರೀ ಸಂಪ್ರದಾಯಗಳನ್ನು ಹೇಳುವುದಲ್ಲ, ಅವುಗಳನ್ನು ಅರಿತು ಆಚರಿಸಿ-ಅನುಸರಿಸುವ ಹಾಗೂ ಮಹಾಸಿದ್ಧಿ-ಸಾಧನೆ ಪಡೆದುಕೊಳ್ಳುವ ಹೆದ್ದಾರಿಯಾಗಿದೆ.

ಸನಾತನವಾದ ವೀರಶೈವ ಧರ್ಮ ವಿಶ್ವವಿಕಾಸ ಕ್ರಮದಲ್ಲಿ ಮೂವತ್ತಾರು ತತ್ವಗಳನ್ನು ಸ್ವೀಕರಿಸುತ್ತದೆ. ಹಾಗೆಯೇ ಸ್ವೀಕರಿಸುವಾಗ ಒಂದೊಂದು ಸಿಂಹಾಸನ ಪೀಠಕ್ಕೆ ಬೀಜಾಕ್ಷರವಾಗಲಿ, ಮಹಾಭೂತವಾಗಲಿ, ಜ್ಞಾನೇಂದ್ರಿಯವಾಗಲಿ, ಕರ್ಮೇಂದ್ರಿಯವಾಗಲಿ, ತನ್ಮಾತ್ರಯವಾಗಲಿ, ಸಾದಾಖ್ಯವಾಗಲಿ, ಅಂತಃಕರಣವಾಗಲಿ, ಕಲೆಯಾಗಲಿ ಒಂದೊಂದನ್ನು ನಿರ್ದೇಶಿಸಿ ನಿರೂಪಿಸುವುದನ್ನು ಕಾಣಬಹುದಾಗಿದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಗಮನಿಸಿದಾಗ ವೀರಶೈವ ಧರ್ಮವು ಪಂಚಾಚಾರ್ಯರಿಗೆ ಕೊಟ್ಟ ಪ್ರಾಶಸ್ತ್ರವನ್ನು ಅವಲೋಕಿಸಬಹುದಾಗಿದೆ. ಯಾವುದೇ ಒಂದು ಧರ್ಮ ತಾನು ಆಚರಿಸುತ್ತಿರುವ ಆಚರಣೆಗೆ ಒಂದು ದರ್ಶನ ಶಾಸ್ತ್ರವನ್ನು ಹೊಂದಿಕೆಯಾಗಿ ಸಮರ್ಥಿಸಿಕೊಳ್ಳಲೇಬೇಕು. ಹಾಗೆಯೇ ವೀರಶೈವ ಧರ್ಮವನ್ನು ವಿಶ್ಲೇಶಿಸಿರುವುದನ್ನು ಇಲ್ಲಿ ವಿಶೇಷವಾಗಿ ಕಾಣಬಹುದಾಗಿದೆ. ಇದೊಂದು ವ್ಯವಸ್ಥಾಬದ್ಧ ಅಧ್ಯಯನದ ಕುರುಹಾಗಿದೆ. ಆದಿ ಪಂಚಾಚಾರ್ಯರು ಸ್ಥಾಪಿಸಿದ ಪರಮ ಪಂಚಪೀಠಗಳ ಪರಿಚಯವನ್ನು ಈ ಕೆಳಗಿನಂತೆ ನಾವುಗಳು ಕಾಣಬಹುದಾಗಿದೆ.

ಶ್ರೀ ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ: ಪರಶಿವನ ಪ್ರಥಮ ಮುಖವಾದ ಸದ್ಯೋಜಾತ ಮುಖದಿಂದ ಅವೀರ್ಭವಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮಲಯಾಚಲ ಪ್ರದೇಶದ, ಭದ್ರಾನದಿ ತಟದಲ್ಲಿ ಶ್ರೀ ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸಂಸ್ಥಾಪಿಸಿದರು. ಮಹಾಮುನಿ ಅಗತ್ಯರಿಗೆ ಲಿಂಗದೀಕ್ಷೆ ನೀಡಿ, ಶಿವಾಮೃತ ಸಂದೇಶವಾದ ಶಕ್ತಿವಿಶಿಷ್ಟಿತ ಸಿದ್ಧಾಂತವನ್ನು ಅರುಹಿ ಉದ್ಧರಿಸಿದರು. ವೀರ ಎನ್ನುವ ಪದವನ್ನು ವೀರಶೈವ ಧರ್ಮ ಎಂಬ ಪದದ ಪೂರ್ವಾರ್ಧ ಭಾಗದಲ್ಲಿ ಕಾಣಬಹುದು. ವೀರ ಎಂಬ ಶಬ್ದವು ಜ್ಞಾನದಲ್ಲಿ ನೀರತನ, ವೀರವೃತ್ತಿ ಮತ್ತು ಶಿವಜೀವದ ಐಕ್ಯದ ವಿಶೇಷ ಅರ್ಥವನ್ನು ಸಾರುವ ಪದವಾಗಿದೆ, ಇದು ವೀರಶೈವ ಧರ್ಮದ ಮೂಲ ಉದ್ದೇಶಗಳನ್ನು, ದಿವ್ಯ ಸಂದೇಶಾಮೃತಗಳನ್ನು ತಿಳಿಸುತ್ತದೆ. ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಕೈಗೊಂಡು ಧರ್ಮ ದುಂದುಭಿ ಮೊಳಗಿಸಿದ ಹಿರಿಮೆ ಶ್ರೀ ಪೀಠದ್ದು. ಇದುವರೆಗೂ ನೂರಿಪ್ಪತ್ತೊಂದು ಪರಮಾಚಾರ್ಯರ ಪಾದಸ್ಪರ್ಶದಿಂದ ಪುನೀತಗೊಂಡು ಬಾಗಿ ಬಂದ ಭಕ್ತರಿಗೆ ಮುಕ್ತಿಯನ್ನು, ಧರ್ಮದ ಸಾರವನ್ನು, ಜೀವನದ ವಾಸ್ತವಿಕತೆಯನ್ನು, ಸಿದ್ಧಾಂತದ ಸತ್ವವನ್ನು, ಸಂಸ್ಕೃತಿಯ ಸೊಗಡನ್ನು ತತ್ವಸಿದ್ಧಾಂತದ ತಳಹದಿಯ ಮೇಲೆ ಅರುಹಿ ಬಾಳಿಗೆ ಬೆಳಕನ್ನು ಅನುಗ್ರಹಿಸುತ್ತಲಿದೆ. ಶ್ರೀ ಪೀಠವನ್ನು ಆರೋಹಣ ಮಾಡಿ ಲಿಂಗೈಕ್ಯರಾದ ಶ್ರೀ ರಂಭಾಪುರೀ ವೀರಗಂಗಾಧರ ಜಗದ್ಗುರುಗಳವರು ಕಾಯಕಯೋಗಿಗಳಾಗಿ, ವೀರವೈರಾಗ್ಯ ನಿಧಿಯಾಗಿ, ವೀರತಪಸ್ವಿಗಳಾಗಿ, ಇಷ್ಟಲಿಂಗ ಮಹಾಪೂಜೆಯ ಮೂಲಕವಾಗಿ ಜಗದ ತಮವನ್ನು ಇಂಗಿಸಿದ ವಿಭೂತಿ ಪುರುಷರು. ಸತ್ಯಸುಶೀಲ ಸಾತ್ವಿಕ ಗುಣಗಳನ್ನು ಧರ್ಮದ ಮೂಲಕವಾಗಿ ತಿಳಿಸಿ, ಮನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಹಾಭೋಷವನ್ನು ಸಾರಿ ಸಕಲರ ಶ್ರೇಯಸ್ಸನ್ನು ಬಯಸಿದವರು. ಪ್ರಸ್ತುತ ಪೀಠಾರೋಹಣ ಮಾಡಿರುವ ಪೃಥ್ವಿ ತತ್ವಾಧೀಶ, ಸಮೃದ್ಧಿಯ ಸಂಕೇತದ ಹಸಿರು ಧ್ವಜವನ್ನು ಪಿಡಿದು ಹೊರೆಯುತ್ತಿರುವ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ನಾಡಿನಾದ್ಯಂತ ದಣಿವರಿಯದೇ ನಿತ್ಯವೂ ಸಂಚರಿಸಿ ಧರ್ಮದ ಮಹತ್ತುಗಳನ್ನು ನಾಡಿನ ಜನಮನಕ್ಕೆ ಅರ್ಥಪೂರ್ಣವಾಗಿ ತಿಳಿಸುತ್ತಲಿದ್ದಾರೆ. ಜನಜಾಗೃತಿ ಧರ್ಮ ಸಮಾವೇಶಗಳ ಸಾನಿಧ್ಯವಹಿಸಿ, ತ್ರಿಕಾಲ ಇಷ್ಟಲಿಂಗ ಮಹಾಪೂಜೆಯ ಮೂಲಕವಾಗಿ ಧರ್ಮ ಸಂಪತ್ತನ್ನು ಎಲ್ಲರಿಗೂ ಅನುಗ್ರಹಿಸುತ್ತಲಿರುವರು.

ಶ್ರೀ ಜಗದ್ಗುರು ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠ: ಜಗದೊಡೆಯನ ಎರಡನೇ ಮುಖವಾದ ವಾಮದೇವ ಮುಖದಿಂದ ಪ್ರಕಟಿತರಾದ ಶ್ರೀ ಜಗದ್ಗುರು ದಾರುಕಾಚಾರ್ಯ ಭಗವತ್ಪಾದರು ಮದ್ಯಪ್ರದೇಶದ ವಟಕ್ಷೇತ್ರದ ಶ್ರೀ ಸಿದ್ಧೇಶ್ವರ ಲಿಂಗದಲ್ಲಿ ಅವತರಿಸಿ ಉಜ್ಜಯಿನಿ ಮಹಾಕ್ಷೇತ್ರದಲ್ಲಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸ್ಥಾಪಿಸಿದರು. ಜಲತತ್ವದ ಒಡೆಯರಾಗಿ, ತ್ಯಾಗದ ಸಂಕೇತವಾದ ಕೆಂಪು ವರ್ಣದ ಬಾವುಟವನ್ನು ಹಿಡಿದು ತ್ಯಾಗಮೂರ್ತಿಗಳಾಗಿರುವರು. ಸದ್ಧರ್ಮ ಎಂಬ ಅಂಕಿತವು ಸತ್ಯವಾದ ಧರ್ಮವನ್ನು ಬೋಧಿಸುವುದಾಗಿದೆ ಮತ್ತು ಅದರಂತೆ ಪಾಲಿಸುವುದಾಗಿದೆ. ಸದ್ಧರ್ಮ ಪದವು ಸರಿಯಾದ ಧರ್ಮ, ಒಳ್ಳೆಯ ಧರ್ಮ ಅಥವಾ ಸತ್ಯಧರ್ಮ ಎಂಬರ್ಥವನ್ನು ಕೊಡುತ್ತದೆ. ಜೀವಿಯು ಸದ್ಗುಣಗಳನ್ನು ಹೊತ್ತು ನಿಜಧರ್ಮದ ತತ್ವಾಚರಣೆಗಳನ್ನು ಅರಿತು ಆಚರಿಸುವುದೇ ಇದರ ಅರ್ಥವಾಗಿದೆ. ಅಸುರೀ ಶಕ್ತಿಗಳ ದಮನ, ಶಿಷ್ಯರ ಪಾಲನವೇ ಶ್ರೀ ಪೀಠದ ಮೂಲ ಗುರಿಯಾಗಿದೆ. ಸಕಲರಲ್ಲಿಯೂ ಚಿರಂತನವಾದ ಕ್ರಿಯಾ ಚಕ್ಷುವನ್ನು ಬೆಳೆಸಿ ಸತ್ವಗುಣಗಳನ್ನು ಬಿತ್ತಿ ಬೆಳೆಯುವುದೇ ಆಗಿದೆ. ಶ್ರೀ ಪೀಠದ ಪರಂಪರೆಯಲ್ಲಿ ಅಗ್ರಮಾನ್ಯರಾಗಿ ಜಪ-ತಪಗಳ ಮೂಲಕವಾಗಿ ಮಹತ್ತರವಾದ ವೀರಶೈವ ಧರ್ಮದ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲು ಕಠಿಣ ಅನುಷ್ಠಾನಗಳ ಮೂಲಕವಾಗಿ ಧರ್ಮವನ್ನು ರಕ್ಷಿಸಿದ ಧರ್ಮಸೂರ್ಯ ಮಹಾತಪಸ್ವಿ, ಲಿಂಗೈಕ್ಯ ಶ್ರೀ ಸಿದ್ಧಲಿಂಗ ಭಗವತ್ಪಾದರು ಪರಶಿವನ ಪರಮಾವತಾರಿಗಳಾಗಿ ಬಾಳಿ-ಬೆಳಗಿದ ಮಹಾಸಿದ್ಧಿ ಸಾಧನಾಚಾರ್ಯರು, ನೂರಹನ್ನೊಂದು ಪರಮಾಚಾರ್ಯರ ಕರ್ತೃತ್ವ ಶಕ್ತಿಯಿಂದಾಗಿ ಶ್ರೀ ಪೀಠವು ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಪಾದರ ಧರ್ಮ ಜಾಗೃತಿಯ ಕಾವ್ಯಗಳು ದಿನೇ ದಿನೇ ಉತ್ತಮ ರೂಪ ಪಡೆದುಕೊಂಡು ಸಾಗುತ್ತಲಿದೆ. ಸಕಲರಿಗೂ ಧರ್ಮ-ಸಂಸ್ಕೃತಿಗಳ ಕಂಪು ಇಂಪಾಗುವಂತೆ ಮಾಡಿದೆ.

ಶ್ರೀ ಜಗದ್ಗುರು ಕೇದಾರ ವೈರಾಗ್ಯಸಿಂಹಾಸನ ಮಹಾಸಂಸ್ಥಾನ ಪೀಠ: ಮುಕ್ಕಣ್ಣನ ಮೂರನೇಯ ಅಘೋರ ಮುಖದಿಂದ ಶ್ರೀ ಜಗದ್ಗುರು ಘಂಟಾಕರ್ಣಾಚಾರ್ಯರು ದ್ರಾಕ್ಷಾರಾಮದ ಶ್ರೀ ರಾಮನಾಥ ಲಿಂಗದಿಂದ ಅವತರಿಸಿ ಉತ್ತರಾಂಚಲ ರಾಜ್ಯದ ಕೇದಾರ ಕ್ಷೇತ್ರದಲ್ಲಿ ವೈರಾಗ್ಯ ಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಕಟ್ಟಿದರು. ಶಿವ-ಜೀವರ ಐಕ್ಯದ ಸನ್ನಿವೇಶದಲ್ಲಿ ಶಿವತತ್ವ ಪ್ರಾಪ್ತಿಗಾಗಿ ಶಿವಜ್ಞಾನ, ಶಿವಧ್ಯಾನ, ಶಿವವ್ರತ, ಶಿವೋಪಾಸನೆ, ಶಿವಪೂಜೆ ಎನ್ನುವ ಪಂಚಪರಿಕರಗಳನ್ನು ಸಾಧಿಸುವಾಗ ಉಂಟಾಗುವ ಅರಿಷಡ್ ವರ್ಗಗಳ, ಸಪ್ತವ್ಯಸನಗಳ ಮತ್ತು ಅಷ್ಟಮದಗಳ ನಿಯಂತ್ರಣವನ್ನು ವೈರಾಗ್ಯದ ಮೂಲಕವಾಗಿ ಗೆದ್ದು ಶಿವನಲ್ಲಿ ಒಂದಾಗುವ ಬಗೆಯನ್ನು ಶ್ರೀ ಪೀಠವು ತಿಳಿಸುತ್ತದೆ. ದುಷ್ಟ-ದುರ್ಗುಣಗಳನ್ನು ಸುಡುವ ಅಗ್ನಿ ತತ್ವದ ಒಡೆಯರಾಗಿ ಶೋಭಾಯಮಾನವತೆಯನ್ನು ಬಿಂಬಿಸುವ ನೀಲ ಧ್ವಜವನ್ನು ಹಿಡಿದು ಪರಶಿವನ ಮೂಲ ಅಂಶವನ್ನು. ಧರ್ಮದ ದಾರಿಯನ್ನು, ಮೋಕ್ಷದ ಮಹತ್ವವನ್ನು, ಸತ್ಕರ್ಮಗಳ ಕ್ರಿಯೆಯನ್ನು, ದೇವನ ಪರಿಕಲ್ಪನೆಯನ್ನು ಸಾಧನೆಯ ಮೂಲಕವಾಗಿ ಮಹತ್ವದ ವಿಚಾರಗಳನ್ನು ತಿಳಿಸುವ ಮಹತ್ಕಾರ್ಯ ಮಾಡುತ್ತಲಿದೆ. ಸರಿಸುಮಾರು ಮುನ್ನೂರ ಇಪ್ಪತ್ನಾಲ್ಕು ಮಹಾಚಾರ್ಯರ ಅಗಣಿತ ಕ್ರಿಯಾ ಸಾಧನೆಯ ಸಾರ್ಥಕ ಶ್ರಮದ ಫಲದಿಂದಾಗಿ ಶ್ರೀ ಪೀಠವು ಹಿಮಾಲಯದಲ್ಲಿ ಪರಿಶೋಭಿಸುತ್ತಿದೆ. ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ರಾವಲ್ ಪದವಿಭೂಷಿತ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಅಮೃತ ಸದೃಶ ಧರ್ಮ ಬೋಧಾಮೃತತ್ವದ ಸಾಧನಾ ಕ್ರಮದಿಂದಾಗಿ ಲೋಕೋದ್ಧಾರದ ಕಾರ್ಯಗಳು ಅದ್ದೂರಿಯಾಗಿ ತತ್ವಗಳ ತಳಹದಿಯ ಮೇಲೆ ನಡೆಯುತ್ತಿವೆ.

ಶ್ರೀ ಜಗದ್ಗುರು ಶ್ರೀಶೈಲ ಸೂರ್ಯಸಿಂಹಾಸನ ಮಹಾಸಂಸ್ಥಾನ ಪೀಠ: ಪಶುಪತಿಯ ಚತುರ್ಮುಖದಿಂದ ಉದಯರಾದ ಶ್ರೀ ಜಗದ್ಗುರು ಧೇನುಕರ್ಣಾಚಾರ್ಯರು ಆಂಧ್ರಪ್ರದೇಶ ರಾಜ್ಯದ ಶ್ರೀಶೈಲ ಕ್ಷೇತ್ರದಲ್ಲಿ ಸೂರ್ಯಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸ್ಥಾಪಿಸಿದರು. ಜಗತ್ತಿಗೇ ಬೆಳಕು ನೀಡುವ ಸೂರ್ಯನ ತೆರದಿ, ಸೂರ್ಯಸದೃಶವಾದ ಜ್ಞಾನದ ಪ್ರಭೆಯನ್ನು ಜನರ ಅಂಧಕಾರದ ಬದುಕಿಗೆ ನೀಡಿ, ಸುಜ್ಞಾನದ ಚಿತ್ಕಳೆಯನ್ನು ತುಂಬುತ್ತಲಿರುವ ಶ್ರೀ ಪೀಠವು ಮನದ ಮಲೀನತೆಯನ್ನು ತೊಳೆದು, ಸತ್ಯ ಝೇಂಕಾರದ ನಿನಾದವನ್ನು ಬಿತ್ತರಿಸುತ್ತಿದೆ. ಬಾಳ ಬಾಂದಳಕ್ಕೆ ಪರಶಿವನ ಪರಿಶುದ್ಧವಾದ ತತ್ವ ಚಿಂತನಗಳನ್ನು, ಬದುಕಿನ ಉದ್ದೇಶಗಳನ್ನು, ಜೀವನದ ಮಹತ್ವಾಂಶಗಳನ್ನು ಅರುಹುತ್ತಿರುವುದು ಇತಿಹಾಸ, ಸೂರ್ಯ ಸ್ವರೂಪಿಗಳಾದ ಶ್ರೀ ಪೀಠದ ಜಗದ್ಗುರುವರೇಣ್ಯರು ಧರ್ಮದ ಬೆಳಕನ್ನು ಎಲ್ಲೆಡೆಗೂ ಬಿತ್ತರಿಸಿದ್ದಾರೆ. ವಾಯು ತತ್ವದ ಅಧಿಪತಿಗಳಾಗಿ, ಶಾಂತಿ ಮತ್ತು ಪರಿಶುದ್ಧತೆಯ ಪ್ರತೀಕವಾದ ಶ್ವೇತ ವರ್ಣದ ಧ್ವಜವನ್ನು ಎತ್ತಿ ಹಿಡಿದು ಸತ್‌ ಚಿಂತನೆ, ಸದ್ವರ್ತನೆ, ಸದ್ಭಾವನೆ, ಸದಾಚಾರ, ಸನ್ನಡತೆಗಳನ್ನು ಸಂಸ್ಕೃತಿಯುಕ್ತವಾಗಿ ಬೋಧಿಸುತ್ತ. ಈ ಮಣ್ಣಿನ ಸತ್ವವನ್ನು ಇಮ್ಮಡಿಗೊಳಿಸುವ ಕಾರ್ಯ ನಡೆದುಕೊಂಡು ಬಂದಿದೆ. ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಕರೆದೊಯ್ಯುತ್ತಿದ್ದಾರೆ. ಶಿವಾಚಾರ್ಯ ಭಗವತ್ಪಾದರು ಧರ್ಮದ ಹೆದ್ದಾರಿಯಲ್ಲಿ ಜನರನ್ನು ಸುಸಂಸ್ಕೃತರನ್ನಾಗಿಸಿ

ಶ್ರೀ ಜಗದ್ಗುರು ಕಾರಿ ಜ್ಞಾನಸಿಂಹಾಸನ ಮಹಾಸಂಸ್ಥಾನ ಪೀಠ: ಈಶ್ವರನ ಐದನೇ ಈಶಾನ ಮುಖದಿಂದ ಉದ್ಭವರಾದ ಶ್ರೀ ಜಗದ್ಗುರು ವಿಶ್ವಕರ್ಣಾಚಾರ್ಯರು ಉತ್ತರಪ್ರದೇಶ ರಾಜ್ಯದ ಕಾಶೀ ಕ್ಷೇತ್ರದ ವಿಶ್ವನಾಥ ಲಿಂಗದಿಂದವತರಿಸಿ, ಅಲ್ಲಿಯೇ ಜ್ಞಾನಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸ್ಥಾಪಿಸಿದರು. ಜೀವಾತ್ಮರಿಗೆ ಅಂಟಿದ ಅಜ್ಞಾನದ ಬಂಧವನ್ನು ಬಿಡಿಸಬೇಕಾದರೆ, ಜ್ಞಾನದ ಸ್ವರೂಪನಾದ ಗುರುವಿನ ಮಹಾಮಾರ್ಗದರ್ಶನ ಬೇಕು. ಜ್ಞಾನದ ನಿಧಿಯಾದ ಪರಶಿವನು ಈ ಲೋಕದ ಗುರು, ಮಾನವರನ್ನು ಮಹದೇವರನ್ನಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಅವರನ್ನು ಸಭ್ಯರನ್ನಾಗಿ, ಧರ್ಮವಂತರನ್ನಾಗಿ, ನೀತಿವಂತರನ್ನಾಗಿ, ಕ್ರಿಯಾವಂತರನ್ನಾಗಿ, ವಿದ್ಯಾವಂತರನ್ನಾಗಿ ಪರಿವರ್ತನೆಗೊಳಿಸುವ ಮಹತ್ಕಾರ್ಯ ಶ್ರೀ ಪೀಠದ್ದು, ವಿಶಾಲತೆ ಮತ್ತು ವಿಶ್ವಬಂಧುತ್ವ ಸಾರುವ ಆಕಾಶ ತತ್ವದ ನಾಯಕರಾಗಿ, ಪರಿಪೂರ್ಣತೆಯ ಸಂಕೇತವಾಗಿರುವ ಹಳದಿ ವರ್ಣದ ಧ್ವಜವನ್ನು ಹಿಡಿದು ಭೂಲೋಕದಲ್ಲಿ ಧರ್ಮ ಪ್ರಚಾರಗೈಯುತ್ತಿರುವರು. ಶ್ರೀ ಪೀಠವನ್ನು ಆರೋಹಣ ಮಾಡಿದ ಎಲ್ಲ ಮಹಾಚಾರ್ಯರು ಸಮತೆಯ ಬದುಕನ್ನು ಜನತೆಗೆ ರೂಪಿಸುತ್ತ ಬಂದವರು. ಪ್ರಸ್ತುತ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಧರ್ಮದ ಮೂಲವನ್ನು ನಾಡಿನ ಜನರ ಮನ ಮನೆಯತ್ತ ಧಾವಿಸಿ ತಳ-ತಿರುಳನ್ನು ತಿಳಿಸುತ್ತಿರುವರು. ಮಹಾನಂದದ ಬದುಕನ್ನು ದೊರಕಿಸುತ್ತಿರುವರು.

ವೀರಶೈವ ಧರ್ಮದ ಮಹಾಮನೆಯಲ್ಲಿ ಕಂಡುಬರುವ ವಿಶ್ವವಿಕಾಸ ತತ್ವಗಳನ್ನು ಒಮ್ಮೆ ಅವಲೋಕಿಸಿದಾಗ ಆದಿಯಿಂದ ಪಂಚಪೀಠಗಳಿಗೆ ಸರ್ವರೂ ಪ್ರಧಾನ ಮಾನ್ಯತೆ ನೀಡಿರುವುದನ್ನು ಸ್ಪಷ್ಟಿಕರಿಸಬಹುದಾಗಿದೆ. ಪಂಚಭೂತಗಳಿಗೆ, ಪಂಚತತ್ವಗಳಿಗೆ, ಪಂಚಸೂತ್ರಗಳಿಗೆ, ಪಂಚವರ್ಣಗಳಿಗೆ, ಪಂಚದಿಕ್ಕುಗಳಿಗೆ, ಪಂಚಗೋತ್ರಗಳಿಗೆ, ಪಂಚವೇದಗಳಿಗೆ ಅಧಿಪತಿಗಳಾಗಿರುವ ಪಂಚಾಚಾರ್ಯರು ಪಂಚ ಮಹರ್ಷಿಗಳಾದ ಅಗತ್ಯ, ದಧೀಚಿ, ವ್ಯಾಸ, ಸಾನಂದ ಮತ್ತು ದೂರ್ವಾಸರಿಗೆ ಶಿವ ಬೋಧಾಮೃತತ್ವವಾದ ಶಿವಾದೈತ ಸಿದ್ಧಾಂತವನ್ನು ಅರುಹಿ ಉದ್ಧರಿಸಿದ್ದು ಮರೆಯದ ಐತಿಹಾಸಿಕ ಸಂಗತಿ. ಸನಾತನ ಪಂಚಪೀಠಗಳು ಸಾಗರದಾಚೆ ಅಲ್ಲದೇ ಹಿಮಾಲಯದಾಚೆಗೂ ತಮ್ಮ ಶಾಖೋಪಶಾಖೆಗಳನ್ನು ಹೊಂದಿ ಸಹಸ್ರ ಸಹಸ್ರ ವರ್ಷಗಳಿಂದ ಧರ್ಮ ಪ್ರಸಾರ, ಪ್ರಚಾರ ಮತ್ತು ರಕ್ಷಣಾ ಕಾರ್ಯವನ್ನು ತಾತ್ವಿಕ ಬದ್ಧತೆಯಲ್ಲಿ ನಡೆಸಿಕೊಂಡು ಬಂದಿರುವುದು ಇತಿಹಾಸ ಪ್ರಸಿದ್ಧವಾಗಿದೆ. ಇಂತಹ ಪರಮ ಪೀಠಗಳ ಪಾವನಮಯ ಪರಂಪರೆಯು ಇಂದು-ಮುಂದು ಎಂದೆಂದೂ ಭವ್ಯತೆಯಿಂದ ಮುಂದುವರಿಯುವುದಾಗಿದೆ.

Phone

082662 50424

VISIT

6 am to 8 pm

Email

info@rambhapuripeetha.org

Address

Rambhapuri Mutt Road, Narasimharajapura, Taluka, Balehonnur, Karnataka 577112