b

ಶ್ರೀ ಜಗದ್ಗುರು

ಶ್ರೀ ಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

ಭಾರತ ಮಣ್ಯಭೂಮಿಯಲ್ಲಿ ಅನೇಕ ಧರ್ಮಗಳುಂಟು. ಅವುಗಳೆಲ್ಲ ಮಾನವೀಯ ಮೌಲ್ಯಗಳನ್ನು ಉತ್ತಮಿಕೆಯ ಸರಿದಾರಿಯಲ್ಲಿರಿಸಿ ಜನಮನಕ್ಕೆ ಚೆಂಬೆಳಕನ್ನು ನೀಡಿ ಉದ್ಧರಿಸಿವೆ. ಸತ್ಯ ಸಜ್ಜನಿಕೆಯ ಸಾಕ್ಷಾತ್ಕಾರತೆಗಾಗಿ ಸುಬೋಧವನ್ನಿತ್ತು ಮಾನವ ದೇವನಾಗುವ ಅರುಹನ್ನು ಕುರುಹಾಗಿಸಿವೆ. ವೀರಶೈವ ಧರ್ಮ ಇಲ್ಲಿ ಸನಾತನ, ಶಿವನ ಪಂಚಮುಖಗಳಿಂದ ಅವತರಿಸಿ, ಶಿವನಪ್ಪಣೆಯಾನುಸಾರ ಭುವಿಯಲ್ಲಿ ಸುಪ್ರಸಿದ್ಧ ಶಿವಲಿಂಗಗಳಲ್ಲಿ ಉದಯಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪನೆ ಮಾಡಿ, ಶ್ರೀ ಜಗದ್ಗುರು ಪಂಚಪೀಠಗಳನ್ನು ಕಟ್ಟಿ, ಶಿವಾದ್ವಿತ ಸಿದ್ಧಾಂತವನ್ನು ಸ್ಥಿರಗೊಳಿಸಿ, ಇಷ್ಟಲಿಂಗದೀಕ್ಷೆ ಸರ್ವಮಾನ್ಯಗೊಳಿಸಿ, ಜನನದಿಂದ ಜತನ, ಜತನದಿಂದ ಕಥನ, ಕಥನದಿಂದ ಮಂಥನ, ಮಂಥನದಿಂದ ಮರಣದವರೆಗೂ ಸಂಸ್ಕಾರ ಶುದ್ಧಬದ್ಧತೆಯನ್ನು ಸಾಧ್ಯಂತಗೊಳಿಸಿ ಧರ್ಮದ ದಶಸೂತ್ರಗಳ ಮೂಲಕ ಸಂಸ್ಕೃತಿ, ಪರಂಪರೆ, ನಿಯಮ, ರೀತಿ-ನೀತಿಗಳನ್ನು ನಿತ್ಯದಲ್ಲಿ ಅಳವಡಿಸಿಕೊಳ್ಳುವಂತಾಗಿಸಿದ ಹಿನ್ನೆಲೆಯಲ್ಲಿ ಸನಾತನ ಪರಂಪರೆಯು ಎಂದೆಂದಿಗೂ ಮುನ್ನಡೆದ ದಾರಿ ಹೆದ್ದಾರಿಯಾಗಿ-ಹೆದ್ದೊರೆಯಾಗಿ ಪ್ರವಹಿಸುವಂತಾಗಿದೆ.

ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾಗಿರುವ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ವೀರಶೈವ ದೈವದ ತವರು. ಕೊಲನುಪಾಕಿ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಸತ್ಕಾಂತಿಗಾಗಿಯೇ ಆವೀರ್ಭವಿಸಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಇವರು ಮಾನವೀಯತೆಯ ಕೀರ್ತಿವಂತ ಚಾರಿತ್ರಿಕ ಆದರ್ಶ ಮೌಲ್ಯಗಳನ್ನು ಬೋಧಿಸಿದರು. ಧಾರ್ಮಿಕ ಸತ್ಕಾಂತಿಯ ಜೊತೆ ಜೊತೆಗೆ ನೂರೆಂಟು ಸಾಮಾಜಿಕ ಮಹತ್ಕಾರ್ಯ-ಕ್ರಾಂತಿಗಳನ್ನು ಮುಮ್ಮೊದದ ಕೀರ್ತಿ ಇವರದು. ಲೋಕೋದ್ಧಾರ ಮಾನವರ ಉದ್ಧಾರಕ್ಕಾಗಿ ಸದಾ ಶ್ರಮಿಸುವ ಪರಂಪರೆಯಿತ್ತವರು. ಧಾರ್ಮಿಕ ದಿಗಂತದಲ್ಲಿ ವಿನೂತನ ಹೆಜ್ಜೆಗಳನ್ನು ಮೂಡಿಸಿದ ಇತಿಹಾಸ ಇವರದು. ವೀರಶೈವ ಧರ್ಮ ಸಂಸ್ಥಾಪಕರಾಗಿ, ಧರ್ಮ ಪ್ರವರ್ತಕರಾಗಿ ಮತ್ತು ಯುಗ ಪ್ರವರ್ತಕರಾಗಿ ತತ್ತ್ವ ಸಿದ್ಧಾಂತಗಳ ಸರ್ವರ ಪ್ರವರ್ತಕ ಗಂಗೋತ್ರಿಯಾಗಿರುವವರೇ ಶ್ರೀ ಜಗದ್ಗುರು ಹಿತ ರೇಣುಕಾಚಾರ್ಯರು, ಜಗದ ಜಂಜಡ-ಜಾತಿ ಜಂಜಡಗಳ ಕಳೆದು ಧರ್ಮ ಸಂಸ್ಕೃತಿಯ ಕಂಪನ್ನು ಪಸರಿಸಿದರು. ಧರ್ಮಸೂರ್ಯರೆಂದೆನಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಕಲ್ಯಾಣದ ಕಹಳೆಯನ್ನು ಊದಿ ಧರ್ಮದುಂದುಭಿಯನ್ನು ಮೊಳಗಿಸಿದ ಕಾರಣಿಕ ಪರಮಾಚಾರರು.

ಶ್ರೀ ಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

ಈ ಉಜ್ವಲ ಪರಂಪರೆಯ ಪರೀಧಿಯಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರು ಮತ್ತು ಕಾಲಜ್ಞಾನ ಬರೆದಿಟ್ಟ ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರ ಕ್ರಿಯಾಕರ್ತೃತ್ವಶಕ್ತಿ ಅತ್ಯಮೋಘವಾದುದು. ಇದಕ್ಕೆ ಇನ್ನೊಂದು ಶಕ್ತಿ ಸಾಟಿಯಾಗದು. ಮಾನವೀಯತೆಯ ಅನುಕಂಪ ಮತ್ತು ಸಮಾಜಿಕ ಕಳಕಳಿ ಜನಮನವನ್ನು ನಿತ್ಯ ಸಂಧ್ಯಾವಂದನೆ, ಗೋಧೂಳಿ ಸ್ಪಂದನೆ, ಪರಿಸರ-ಪ್ರಕೃತಿ ಪೂಜೆಗಳಿಂದ ಶುಚಿತ್ವಗೊಳಿಸುತ್ತಲೇ ಉದ್ಧರಿಸುತ್ತಲಿದೆ. ಕಾಲಾನುಕಾಲದಲ್ಲಿ ವೀರಪೀಠಾರೋಹಣಗೈದ ಪರಮಾಚಾರ್ಯರು ಧರ್ಮ, ಸಂಸ್ಕೃತಿ, ದಾಸೋಹ. ಸಾಮರಸ್ಯ, ಸದ್ಭಾವನೆ ಉಂಟುಮಾಡುವಲ್ಲಿ ಶ್ರಮಿಸಿದ್ದನ್ನು ಎಂದಿಗೂ ಮರೆಯಲಾಗದು. ಭೂಮಂಡಲದ ಪ್ರಥಮಾಚಾರ್ಯರಾದ ಅವರು ಹಾಕಿದ ಹೆದ್ದಾರಿ ಇಂದು ಮುಂದೆಂದೂ ಜನಮಾನಸದ ಭೂಮಿಕೆಯಲ್ಲಿ ಅಳಿಸದ ಮತ್ತು ಆರಿಸದ ಸೂರಬೆಳಕಿನ ಹೆದ್ದಾರಿ. ಇಂತಹ ಅಗಣಿತ ಸತ್ಪರಂಪರೆಯ ಚಿತ್ಕಳೆಯ ಚೆಂಬೆಳಕಿನ 120 ಪರಮಾಚಾರ್ಯರು ವೀರಸಿಂಹಾಸನಾರೂಢರಾಗಿ ಪರಂಪರೆಯ ಸೂರಕಿರಣಗಳನ್ನು ಪ್ರಪಂಚದಾದ್ಯಂತ ಪಸರಿಸಿ ಪ್ರಕಾಶಮಾನಗೊಳಿಸಿದ್ದು ಅನುಕರಣೀಯವಾದ ನಿತ್ಯ ಅನುಷ್ಠಾನವೇ ಆಗಿದೆ. ಶ್ರೀ ಪೀಠದ ಇತಿಹಾಸದಲ್ಲಿ ಮಾಡಿಹೋಗಿರುವ ಶ್ರೀ ಜಗದ್ಗುರುಗಳವರು ವಿಶೇಷ ವೈಶಿಷ್ಟ್ಯಪೂರ್ಣ ಪ್ರಭಾವವನ್ನು ಬೀರಿ ತಮ್ಮದೇ ಆದ ಕ್ರಿಯಾಶೀಲ ಶಕ್ತಿಯ ಸಚ್ಛಾರಿತ್ರ್ಯದ ವ್ಯಕ್ತಿತ್ವದಿಂದೊಡಗೂಡಿದ ಮೇರುತತ್ತ್ವವನ್ನು ಮಲಯಪರ್ವತದಿಂದಲೇ ಭೂಂಮಂಡಲದ ಮಹತ್ತರವಾಗಿಸಿದ್ದು ಅಪೂರ್ವ ಇತಿಹಾಸ. ಒಡೆಯರಾಗಿ ಭರತ ಖಂಡವನ್ನ ಸಂಜೀವಿನಿ ಪರ್ವತವನ್ನಾಗಿ ಮಹತ್ತರವಾಗಿಸಿದ್ದು ಅಪೂರ್ವ ಇತಿಹಾಸ.

ಅಗ್ರಮಾನ್ಯ ಪರಂಪರೆಯ ಪಟ್ಟವಲ್ಲರಿಯಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನವನ್ನು ಅಲಂಕರಿಸಿದ ಪ್ರಸ್ತುತ 121 ನೇಯ ಪರಮಾಚಾರ್ಯರಾದ ಶ್ರೀಮದ್ ಜಗದ್ಗುರು ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿನವ ರೇಣುಕರು. ಯುಗಯುಗಗಳಲ್ಲಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಅಪರಾವತಾರದ ಪ್ರಸನ್ನ ರೇಣುಕರೇ ತಾವಾಗಿ ಸತ್ಪರಂಪರೆಯ ಸತ್ನಿಯಾಕ್ರಾಂತಿಗಳನ್ನು ಸಹಜ ಸೃಜನಾತ್ಮಕವಾಗಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಹಸಿರು ಧ್ವಜ, ಧರ್ಮ ದಂಡವನ್ನಿಡಿದು ಲೋಕ ಸಂಚಾರಗೈಯುತ್ತ ಸಮಾಜ, ಸಂಸ್ಕೃತಿ, ಸಂಸ್ಕಾರ, ಪರಂಪರೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಗಟ್ಟಿ ಹೆಜ್ಜೆಗಳನನಿಟ್ಟು ದಿಟ್ಟ ನಿಲುವಿನೊಂದಿಗೆ ಸಾಗುತ್ತಿರುವರು. ಶ್ರೀ ಪೀಠದ ಚಾರಿತ್ರಿಕ ಇತಿಹಾಸದಲ್ಲಿಯೇ ಮೇರುಪರ್ವತದಷ್ಟೇ ಗಮನಾರ್ಹವಾದುದು ಮತ್ತು ಸಂಕಲ್ಪಿತ ಕಾರ್ಯಸಾಧನೆಗಳನ್ನು ಶೀಘ್ರ ಸನುಷ್ಠಾನ ಮಾಡಿ. ಜಯಶೀಲರಾಗಿ ಶಾಶ್ವತವಾಗುಳಿಯುವಂತಾಗಿಸಿದ್ದು ಹೆಮ್ಮೆಯ ಸಂಗತಿ. ವೀರಶೈವ ಧರ್ಮ ಸಾಮ್ರಾಜ್ಯದ ಧ್ವಜವನ್ನು ಗಗನೆತ್ತರಕ್ಕೇರಿಸಿ

ವೀರಪೀಠಾರೋಹಣದ ಸಂದರ್ಭದ ಸಂಕಲ್ಪಾನುಷ್ಠಾನಗಳನ್ನು ಸಷ್ಕ್ರಿಯಾಶೀಲಗೊಳಿಸಿದ್ದು ಅವರ ಕಾರ್ಯ ಸಫಲತೆಗೆ ದಿಕ್ಕೂಚಿಯಾಗಿದೆ. ಯಾವುದಾದರೊಂದು ಕಾರ್ಯವನ್ನು ಒಮ್ಮೆ ಯೋಜಿಸಿ, ಯೋಚಿಸಿ, ಆಲೋಚಿಸಿ, ಪರ್ಯಾಯಾಲೋಚಿಸಿ, ಸಂಯೋಜಿಸಿ, ಸಂಘಟಿಸಿದರೆಂದರೆ ಅದು ಸಂಪೂರ್ಣಗೊಳ್ಳುವವರೆಗೂ ಛಲ ಬಿಡದೆ ಮನೋಬಲದಿಂದ ಸುಲಭಸಾಧ್ಯಗೊಳಿಸಿಯೇ ಮುಂದಿನದರತ್ತ ಹೆಜ್ಜೆಯಿಡುವ ಮಹತಿ ಅವರದು. ಶ್ರೀ ಜಗದ್ಗುರುಗಳವರು ಬಾಲ್ಯದ ದಿನಗಳಲ್ಲಿಯೇ ಬದುಕು ಏನೆಂಬುದನ್ನು ಅರಿತುಕೊಂಡು ಸಮಾಜದಲ್ಲಿ ಬೆರೆತುಕೊಂಡವರು. ಜೀವನದಲ್ಲಿ ಬೆಂದು-ಬೆಳೆದು-ಬಾಳುವ ಪರಿಯನ್ನು ಹದವಾಗಿ-ಮೆದುವಾಗಿ ಹಿಡಿದಿಟ್ಟುಕೊಂಡವರು. ಯಾರು ನಮ್ಮವರು. ಯಾರು ಸಹಕಾರಿಗಳು, ಯಾರು ಹಿತವರು ಎಂಬುದನ್ನು ಅವರ ಕಷ್ಟದ ದಿನಗಳಲ್ಲಿಯೇ ಸ್ಪಷ್ಟತೆಯಿಂದ ತಿಳಿದು, ಅವರ ಅಂಕಗಣಿತ ಅರಿಯದೇ ಜರಿದವರೆದುರೇ ಪ್ರಯತ್ನಮಾತ್ರದಿಂದಲೇ ಜಟ್ಟಿಗರಾಗಿ ನಿಂತವರು. ಪೂರ್ವಾಶ್ರಮದ ಪಿತೃವಾತ್ಸಲ್ಯ, ಅಂತಃಕರಣಗಳನ್ನೆಲ್ಲ ಅಳವಡಿಸಿಕೊಂಡು ಬದುಕಿನ ಬಗೆಯನ್ನು ಹದಿಬದಿಯಲ್ಲಿ ಬಲಿಸಿ-ಬೆಳೆಸಿಕೊಂಡವರು. ಅವರಗಲಿಕೆಯ ನಂತರದಲ್ಲಿ ಸಣ್ಣವರಿದ್ದಾಗಲೇ ಬಹುದೊಡ್ಡ ಜವಾಬ್ದಾರಿ ಹೊತ್ತು, ಮಾತೋಶ್ರೀಯವರ ಅಕ್ಕರೆಯ ಹಾಗೂ ಹಿರಿಯಕ್ಕನವರ ಮಾತೃತ್ವದ ಮಮತೆಯಲ್ಲಿ ಪರಿಸ್ಥಿತಿ-ಮನಸ್ಥಿತಿಯ ನಿಜಾನುಭಾವದಿಂದ ನಿಭಾಯಿಸುವಿಕೆಯನ್ನು ನೈಜವಾಗಿಸಿಕೊಂಡು ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಕುಟುಂಬದವರೊಟ್ಟಿಗೆ ಒಂದಾಗಿ ಚಂದಾಗಿ ಹೆಗಲಿನ ಹೊಣೆ ಹೊತ್ತುಕೊಂಡೇ ಮಾತೆಯವರ ಆಶ್ರಯದಲ್ಲಿ ಆಧ್ಯಾತ್ಮದ ಆಶ್ರಮ ರೂಪಿಸಿಕೊಂಡವರು.

ಶ್ರೀ ಸನ್ನಿಧಿ ಪೂರ್ವಾಶ್ರಮದಲ್ಲಿ ಶಿಕ್ಷಣ ಪಡೆಯುವಾಗ ಅತ್ಯುನ್ನತ ಶ್ರೇಣಿಯನ್ನು ಹೊಂದಿ, ಮೊದಲಿಗರಾಗಿ ಆಗಿನ ಕಾಲದಲ್ಲಿಯೇ ಉತ್ತಮ ಫಲಿತಾಂಶ ಪಡೆದದ್ದು ಪತ್ರಿಕಾ ಮಾಧ್ಯಮದಲ್ಲಿ ಮುದ್ರಣಗೊಂಡಿದ್ದು ಕಳಸವಿಟ್ಟಂತಾಗಿತ್ತು. ಚುರುಕಿನ ನಡೆಯಿಂದ ಮಹತ್ವದ ಶಿಕ್ಷಣ ಪಡೆದುಕೊಂಡು ಆಂತರಿಕ ಅಲೌಕಿಕ ಸತ್ವವನ್ನು ಆಸ್ವಾದಿಸುತ್ತಲೇ ಲೌಕಿಕ ಜಗತ್ತಿನಡೆಯಿಂದ ದೂರ ಕ್ರಮಿಸುತ್ತ ಕ್ರಮೇಣ ಪಾರಮಾರ್ಥಿಕದತ್ತ ಒಲವಿನ ಬಲ ರೂಢಿಸಿಕೊಂಡು ಸಕಲ ಸದ್ಭಕ್ತರ ಜೀವಾತ್ಮರಿಗಾಗಿಯೇ ಅಂದಿನಿಂದಲೇ ಪರಮಾತ್ಮನ ಜಪ-ತಪ-ಧ್ಯಾನಗಳಲ್ಲಿ ನಿರತರಾಗಿಯೇ ಧಾರ್ಮಿಕ ಬದುಕಿಗೆ ಆಂತರಿಕ ಬೇಲಿ ಹಾಕಿಕೊಂಡವರು. ಹುಬ್ಬಳ್ಳಿ ತಾಲೂಕಿನ ಹಳ್ಳಾಳ ಹಿರೇಮಠವು ಪಾತ್ರವರ್ಗ ಪರಂಪರೆಯ ಮಠವಾದ್ದರಿಂದ ತೆರವಾಗುಳಿದ ಪಟ್ಟಾಧಿಕಾರಿಗಳ ಸ್ಥಾನಕ್ಕೆ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಹಾಗೂ ಶ್ರೀ ವೀರರುದ್ರಮುನಿ ಜಗದ್ಗುರುಗಳವರ ಅಭಯ-ಆದೇಶ-ಅಕ್ಷಯಾಶೀರ್ವಾದದಲ್ಲಿ ಮತ್ತು ಗ್ರಾಮದವರ ಪೂರ್ಣಮತದೊಂದಿಗೆ ಪಟ್ಟಾಧಿಕಾರವನ್ನು ಹೊಂದಿ ಮಹತ್ತೂರ್ಣ ಜವಾಬ್ದಾರಿಯನ್ನು ಶಿರದಮೇಲೇರಿಸಿಕೊಂಡರು. ವಯಸ್ಸು ಚಿಕ್ಕದು, ಹಿರಿಯರಿಲ್ಲದ ಮನೆ, ಮಾತೋಶ್ರೀಯವರ ಜವಾಬ್ದಾರಿ, ತುಂಬಿದ ಸಾಮಾಜಿಕ ಬದ್ಧತೆಯ ಕುಟುಂಬ, ಆರಂಕಣದ ಸುಸಂಸ್ಕೃತ ಮಠ, ಸ್ವಾಭಿಮಾನದ ಮನೆ, ಏನೆಲ್ಲ ಇದ್ದರೂ ಇಲ್ಲದಂತಹ ಪರಿಸ್ಥಿತಿಯಲ್ಲೂ ಬಂಧು-ಬಾಂಧವರ ಅಲ್ಪಸ್ವಲ್ಪ ಸಹಕಾರದಿಂದ ದೂರವಿದ್ದ ಅರಿವಿನ ಕೊರತೆಯ ಆಡಿಕೆಗಳ ಮಧ್ಯದಲ್ಲಿಯೇ ಬಲ್ಲವರಿಂದ ಬಲವಾದ ಬಂಧುರ ಮನೋಬಲಗಳಿಂದಲೇ ಎಲ್ಲವನ್ನೂ ಸುಲಭ ಸಡಿಲಗೊಳಿಸಿಕೊಂಡು ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಆದೇಶದಂತೆ ಬೆಂಗಳೂರಿಗೆ ಹೆಚ್ಚಿನ ಅಧ್ಯಯನಕ್ಕಾಗಿ ಪಯಣ ಮಾಡಬೇಕಾದ ಸುಸಂದರ್ಭದಲ್ಲಿ ಹಿರಿಯರ ಹಿರಿತನದಲ್ಲಿ ಸಂಸಾರ-ಸದ್ಭಕ್ತ ಮಂಡಳಿಯ ಚಿಂತೆ, ಕುಟುಂಬವನ್ನು ಹಿರಿಯ ಸುಪರ್ದಿಗಿತ್ತದ್ದನ್ನು ಒಮ್ಮೆ ನೆನೆದರೆ ಕಲ್ಲೂ ಸಹ ಕರಗಿ ಮರುಗವಂತಹದ್ದು.

ಬದುಕಿನ ಪಯಣದಲ್ಲಿ ಪ್ರಮಾಣಾತ್ಮಕವಾಗಿ ಪ್ರಗತಿಯ ನಡೆಯನ್ನು ಮನಗಂಡ ಸನ್ನಿಧಿ ಶ್ರೀ ಜಗದ್ಗುರು ರೇಣುಕ ಭಗವತ್ಪಾದರ ದಶ ಸೂತ್ರಗಳ ಚೆಂಬೆಳಕನ್ನು ಪಡೆಯಲು ಮನತುಂಬ ವೃತ್ತಿಚೈತನ್ಯದ ಚಿಲುಮೆಯನ್ನು ತುಂಬಿಕೊಂಡು ಏನೊಂದೂ ಇಲ್ಲದೇ ಖಾಲಿ ಕೈಯಿಂದ ಬೆಂಗಳೂರಿಗೆ ಆಗಮಿಸಿದ್ದರೂ ಹೃದಯ-ಹಸ್ತತುಂಬ ಆದರ್ಶ ತತ್ತ್ವಾನುಭವದ ಗುರಿಯೊಂದಿಗೆ ಮಹಂತರಮಠದಲ್ಲಿದ್ದು ಅಚ್ಚುಮೆಚ್ಚಿನ ಸುಕಾರ್ಯಗಳನ್ನು ಸಂಗಮಿಸಿಕೊಂಡು ಸಂಘಟಿಸಿ ಎಲ್ಲರಿಗೂ ಬೆಲ್ಲದಚ್ಚಿನಂತೆ ಹೆಗ್ಗುರುತು ಮೂಡಿಸಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಸ್ಕೃತಿಯನ್ನು ಸಮ್ಮಿಳನಗೊಳಿಸಿಕೊಂಡು ಸಂಸ್ಕಾರಯುಕ್ತ ಹಲವಾರು ಧಾರ್ಮಿಕ ಕಾರ್ಯಗಳನ್ನು ಕೈಗೊಂಡರು. ಮುಂದೆ ಹಳ್ಯಾಳ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ವಿವಿಧ ಸಭೆ-ಸಮಾರಂಭಗಳನ್ನು ಆಯೋಜಿಸುವಲ್ಲಿ ಮಹತ್ತರವಾಗಿ ಮುಂಚೂಣಿ ಪಾತ್ರ ನಿರ್ವಹಿಸಿದರು. ಸೂಕ್ಷ್ಮಮತಿಗಳು, ಉದಾರ ಔದಾರ್ಯದ ಆಧ್ಯಾತ್ಮದ ಜೀವಿಗಳು, ಅನುಭವದ ಅನುಭಾವಿಗಳು, ಸಾಧನಾ ಖಣಿ ಸಂಕಲ್ಪಿಗಳು, ನಿಷ್ಠ-ಸ್ಪಷ್ಟ ಕಾರ್ಯ ಸಾಧಕ ಸಹ್ಯಾದಿಗಳು, ಏಕಾಗ್ರಮತಿ, ಅಧ್ಯಯನದಲ್ಲಿ ಒಮ್ಮೆ ಕೇಳಿದ್ದನ್ನು ತತ್ಕಾಲದಲ್ಲಿ ಹೃದಯದಲ್ಲಿ ಬರೆದಿಟ್ಟುಕೊಳ್ಳುವ ಸೂಕ್ಷ್ಮಮತಿಗಳು, ಉತ್ತಮ ಲೇಖಕರು, ಪ್ರಬುದ್ಧ ಯಥಾವತ್ ವಾಕ್ಸಟುಗಳು, ಪ್ರವಚನ ಪಟುಗಳು, ಸಂಘಟನಾ ಬಾಹುಬಲಿಯಾಗಿ ಬೆಳೆದ ಸನ್ನಿಧಿ ಮಾಡುವ, ಆಡುವ, ನೋಡುವ ಕಾರ್ಯದಲ್ಲಿ ಮಹಾಗುರುವಿನ ಮಾರ್ಗದರ್ಶನದ ಬೆಳಕಿನ ಕಿರಣಗಳ ಪ್ರಭಾವಳಿಯಲ್ಲಿ ಚೆಂಬೆಳಕಿನ ಹೊಳಪು ಪಡೆದವರು, ಅವರ ಆಶಯದ ಆಶ್ರಯದ ಆಶೀರ್ವಾದದಲ್ಲಿ ಅಜಾನುಬಾಹುಗಳಾಗಿ ಬೆಳೆದು ಫಲಭರಿತ ನೆರಳು ನೀಡುವ ಹೆಮ್ಮರವಾಗಿ ಧರ್ಮದಾಶ್ರಯ ನೀಡುತ್ತ ನಿಂತವರು. ಮಡಿ-ಛಡಿಯ ತುಡಿತವಡಿ ಆಡದವರ. ಆಡಿಕೊಂಡವರೆದುರೇ ಬಲ್ಲಿದವರಾಗಿ ಸರ್ವಕಿರಣ ಹೀರಿಕೊಂಡು ಸಬಲಗೊಂಡವರು, ವಿರೋಧಿಗಳೆಲ್ಲ ಬಾಯ್ಕುಚ್ಚಿಕೊಂಡು ಮೂಲೆ ಸೇರುವಂತೆ ಮಾಡಿದ್ದು ಕೇವಲ ಕಮಭರಿತ ಕಾರ್ಯವಲ್ಲರಿಯಿಂದಲೇ, ಸಾಧನೆಯ ಸತ್ಪಥದದಲ್ಲಿ ಶೃಂಗವನ್ನೇರಿ ನಿಂತ ಶ್ರೀ ಜಗದ್ಗುರುಗಳವರು ಶ್ರೀ ರಂಭಾಪುರಿ ವೀರರುದ್ರಮುನಿದೇವ ಜಗದ್ಗುರುಗಳವರ ಸೇವಾಕೈಂಕರ್ಯದಲ್ಲಿ ಅತ್ಯಂತ ನಿಕಟ-ಪ್ರಕಟ ಸ್ಪುಟವಾದ ಸ್ಪಟಿಕದಂತೆ ನೆಚ್ಚಿನ ಶ್ರೇಷ್ಠ ಶಿಷ್ಯತ್ವವನ್ನು ಸ್ವೀಕರಿಸಿ ಸಾರ್ಥಕ್ಯದ ಸಾಧನಾ ಮೈಲುಗಲ್ಲನ್ನು ಶಾಶ್ವತಗೊಳಿಸಿದರು. ಶಿವಗಂಗೆಯ ಶಿಖರವೇರಿ ಶಿವಪೂಜಾನುಷ್ಠಾನಗಳ ಜೊತೆಗೆ ಶಿವಪುತ್ರ ವೀರಭದ್ರನ ಪೂಜಾಕೈಂಕರ್ಯ ನೆರವೇರಿಸಿ ಚಿಚೈತನ್ಯದ ಫಲಭರಿತ ಮಣ್ಯದ ಹಣ್ಣನ್ನು ಸಂಪಾದಿಸಿಕೊಂಡರು. ಹಿಂತಿರುಗಿ ನೋಡದೆ ಸತ್ಯದ ಸನ್ಮಾರ್ಗದಲ್ಲಿ ಮುನ್ನಡೆದು ಶ್ರೀ ಜಗದ್ಗುರು ರೇಣುಕರ, ಶ್ರೀ ವೀರಭದ್ರಸ್ವಾಮಿಯವರ ಸರ್ವಾದರ್ಶದ ಸತ್ಪಲವನ್ನು ಸಾಮಾನ್ಯರಿಗೂ ಹಂಚಿ ಮೆಚ್ಚಿನ ಮಹಿಮಾಶೀಲರಾದವರು. ಇವರತ್ತ ಯಾರೇ ಬರಲಿ, ಏನೇ ಕೇಳಲಿ ಯಾವುದನ್ನೂ ಅಲ್ಲಗಳೆಯದೇ ಅಕ್ಕರೆಯಿಂದ ಆದರಿಸಿ ಸಾಂತ್ವನ, ಮಾತೃತ್ವ, ಮಮತೆ, ಔದಾರ್ಯ, ಕರುಣೆ, ಸಹಾಯ, ಪ್ರೇರಣೆ, ಪ್ರೋತ್ಸಾಹ ತುಂಬಿ ಚಿತ್ಕಳಾಚೈತನ್ಯಶೀಲರಾದರು. ಮಹಾಗುರುವರರ ದೇಹಾರೋಗ್ಯ ಕ್ಷೀಣಿಸಿದಾಗ ಅರೆಕ್ಷಣವೂ ತೊರೆದಿರದೆ ತೆರೆದ ಕಣ್ಣಿನ ಚಿಕಿತ್ಸೆಯ ಸಂದರ್ಭದಲ್ಲಿ ಮುತುವರ್ಜಿ ವಹಿಸಿ ಸೇವೆಮಾಡಿ ಗುರುಕೃಪಾಶೀರ್ವಾದಕ್ಕೆ ಪಾತ್ರರಾದರು.

ಗುರು ಕರುಣೆಯೊಂದಿದ್ದರೆ ಏನೆಲ್ಲವನ್ನೂ ಸಾಧಿಸಿ ಸಾಧ್ಯಗೊಳಿಸಬಹುದು ಎಂಬ ಮಾತಿನಂತೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರು ಗುರುಕೃಪಾ ಪ್ರಸನ್ನತೆಯ ಸಿರಿಯಿಂದ ಶಾಂತಚಿತ್ತರಾಗಿ ಪೌರ್ಣಿಮೆಯ ಚಂದಿರನಂತೆ ಬೆಳೆದು ಛಲದಿಂದ ಬಲಗೊಂಡು ಸದ್ದಲರಾಗಿರುವರು. ಇವರ ಹಿಮಾಲಯದೆತ್ತರದ ಏರಿಕೆಯ ಬದುಕನ್ನು ಕಂಡ ಆಗದವರು ಹಾರಿಕೆಯ ಮಾತುಗಳನ್ನಾಡಿದ್ದೆಷ್ಟೋ, ಮನದೊಳಗೇ ಹಾರಾಡಿ-ತೂರಾಡಿ-ರೇಗಾಡಿದವರೆಷ್ಟೋ, ಅಡ್ಡಪಡಿಸಿ ಸೆಡ್ಡುಹೊಡೆದು ತೊಡೆಮುರಿದುಕೊಂಡವರೆಷ್ಟೋ, ಉಪ್ಪುಂಡವರು-ಹೆಚ್ಚುಂಡವರು ಉಪಕಾರ ಮರೆತವರೆಷ್ಟೋ, ಅದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆಯೇ ಸಂಯಮದಿಂದ ಶ್ರೀ ಮಹಾಗುರು ಮಾಡಿದ ಆಜ್ಞೆಯನ್ನು ಅನುಸರಿಸಿ ಮುನ್ನಡೆಯವತ್ತ ಗಮನ ಹರಿಸಿ, ಗಣಾಧೀಶ್ವರ ಸ್ಥಾನದ ಗರಿಮೆ-ಹಿರಿಮೆ, ಗುರುಸ್ಥಲದ ಪ್ರಖರ ಪ್ರಭೆಯನ್ನು ಪ್ರಜ್ವಲಿಸುವಲ್ಲಿ ಯಶಸ್ಸಿಗರಾಗಿದ್ದು ಗುರುತರವಾದ ಹೆಗ್ಗುರುತು. ವೀರಪೀಠಾರೋಹಣದ ಸಂದರ್ಭದಲ್ಲಿ ಯೋಜನಾಷ್ಠಕಗಳನ್ನು ಘೋಷಿಸಿ ಅವುಗಳನ್ನೆಲ್ಲ ಧರ್ಮದ ಚೌಕಟ್ಟಿನಲ್ಲಿಯೇ ಸಾಕಾರಗೊಳಿಸಿದ್ದು ಮಹತ್ತರ ಮೈಲಿಗಲ್ಲು. ಆಡಿದಂತೆ ಮಾಡುವುದು, ಮಾಡಿದಂತೆ ನಡೆಯುವುದು, ನಡೆದಂತೆ ನುಡಿಯುವುದು ಮಹಾಸನ್ನಿಧಿಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ, ಅನವರತ ಪರಿಸರ ಪೂಜಾ ಪರ್ವವನ್ನು ಆರಂಭಿಸಿ, ನೂತನ ಸಂವತ್ಸರಾಗಮನವನ್ನಾಶಿಸಿ ಶ್ರೀ ರಂಭಾಪುರಿ ಮಹಾಪೀಠದ ಸಮಗ್ರ ಸಂಪೂರ್ಣ ಸರ್ವಾಂಗ ಶ್ರೇಯೋಭಿವೃದ್ಧಿ ಮತ್ತು ಪುನರುತ್ಥಾನದ ಸಂಕಲ್ಪತ್ವವನ್ನು ಸದಬಲದಲ್ಲಿ ಸನ್ನಿಹಿತಗೊಳಿಸಿ ಕಾರ್ಯರೂಪಕ್ಕೆ ತರುವಲ್ಲಿ ಮಾಡಿದ ಶ್ರಮ ಅಹೋಬಲವಾದದ್ದು.

ಭಕ್ತಾಭಿಮಾನಿಗಳಲ್ಲಿ ಮೂಲ ಧರ್ಮಪೀಠಗಳ ಬಗ್ಗೆ ಅರಿವು ಮೂಡಿಸುತ್ತ ಧರ್ಮಯಾತ್ರೆ, ಸಂಕಲ್ಪಯಾತ್ರೆ, ಭಕ್ತಹಿತಯಾತ್ರೆಗಳನ್ನು ವಿಜಯಯಾತ್ರೆಗಳನ್ನಾಗಿಸಿ ಎಲ್ಲೆಲ್ಲಿ ಅಧರ್ಮ, ಅನೀತಿ, ಅಕ್ರಮಗಳಿದ್ದವೋ ಅಲ್ಲೆಲ್ಲಿಯೂ ಮುನ್ನುಗ್ಗಿ ವೀರಶೈವ ಪಂಚಪೀಠಗಳ ಧ್ವಜವನ್ನು ಮೆರೆಸಿದ್ದು ಹಿರಿಸಾಹಸದ ಸಾಧನಾಶಿಖರ. ಹಿರಿತನದ ಸಿರಿಯಲ್ಲಿ ವೀರಕಹಳೆಯನ್ನು ಮೊಳಗಿಸಿ ಧರ್ಮಕ್ಕಾಗಿ ದುಡಿಯುವ, ಮಡಿಯುವ ಮನಸ್ಸುಗಳನ್ನು ಸಮನಾಗಿ ಸಂಘಟಿಸಿ ದೇಶ-ಕೋಶಗಳಲ್ಲಿ ಅಚಲವಾದ ಭಕ್ತಿಭಾವಗಳನ್ನು ಒಂದೆಡೆಗೆ ಒಗ್ಗೂಡಿಸಿ ವೀರಪೀಠದ ಮಹತ್ತನ್ನು ಇಹಪರ ಸಾರಿದ್ದು ಸಿಹಿನೆನಪು. ಅಂದಿಗಲ್ಲ, ಇಂದಿಗಲ್ಲ, ಮುಂದಿಗಿಲ್ಲ ಎನ್ನುವ ಮದವೇರಿದವರಿಗೆ ಹದುಳದಿಂದಲೇ ಹರಿತವಾದ ಕಾರ್ಯಭರತೆಯಲ್ಲಿ ಬುದ್ಧಿಬರುವಂತಾಗಿಸಿದ್ದು ಅನುಪಮ ಅನುಭಾವ. ನೋವುಗಳನ್ನು ಸಂಕಷ್ಟಗಳನ್ನು ನುಂಗಿಕೊಂಡು, ಅವುಗಳನ್ನೇ ಗಾಳವಾಗಿಸಿಕೊಂಡು ನೋವು-ನಂಜಿಟ್ಟವರೇ ತಪ್ಪನ್ನರಿತು ಇವರತ್ತ ಕರಮುಗಿದು-ಶಿರಬಾಗಿ ಬರುವಂತಾಗಿಸಿದ್ದು ಇನ್ನೊಂದು ಕ್ಷಣ. ಶ್ರೀ ರಂಭಾಪುರಿ ಸನ್ನಿಧಿಯೆಂದರೆ ಅದೊಂದು ವಿಶ್ವಕೋಶ, ವಿಶ್ವಾಧೀಶ, ವಿಶ್ವಾಸದ ಖಣಿ, ವಿಶೇಷತ್ವದ ಶಿರೋಮಣಿ. ಅವರ ನೋಟದಲ್ಲಿಯೇ ಕಟುತ್ವವನ್ನು ಕರುತ್ವಗೊಳಿಸುವ, ಪಶುತ್ವವನ್ನೇ ಪ್ರಸನ್ನಗೊಳಿಸಿ ಪರಮಾತ್ಮನನ್ನಾಗಿಸುವ ಮಾಧುರ್ಯದ ತಪವಿದೆ. ವಾಣಿಯಲ್ಲಿ ಎಂತಹವರನ್ನೂ ಮಣಿಸುವ ಪೋಣಿಸುವ ಪೋಷಿಸುವ-ಪ್ರೋಕ್ಷಿಸುವ ಪ್ರೇರೇಪಣೆಗೊಳಿಸುವ ಶಕ್ತಿಯ ಔದಾರ್ಯದ ಸಾಮರ್ಥ್ಯವಿದೆ. ಹಸ್ತದಲ್ಲಿ ಪರಮಾತ್ಮನ ಸಾನ್ನಿಧ್ಯವಿದೆ. ಪಾದದಲ್ಲಿ ಪದ್ಮಾಲಕುರದ ಫಲಶೃತಿ ಸಿದ್ಧಿಯಿದೆ. ಅಂತರಂಗದಲ್ಲಿ ಶ್ರೀ ಜಗದ್ಗುರು ರೇಣುಕರ ಕ್ಷೇತ್ರನಾಥ ವೀರಭದ್ರಸ್ವಾಮಿ ಬುದ್ಧಿಯ ಗದ್ದುಗೆ ಮಂದಿರವಿದೆ. ಕರಣಂಗಳಲ್ಲಿ, ಕ್ರಿಯೆಗಳಲ್ಲಿ ಪೂರ್ವದ ಪರಮಾಚಾರರ ಆಶಯದ ಅಂಕುರವನ್ನು ಹಿರಿ-ಸಿರಿ ಮರವನ್ನಾಗಿಸುವ ಪುಣ್ಯತ್ವವಿದೆ. ಅವರೆಂದರೆ ತಾಯಿ-ತಂದೆ-ಬಂಧು-ಬಾಂಧವ-ಸಮಾಜ-ಸಮೂಹ-ಸಂಸ್ಕಾರ-ಸಂಸ್ಕೃತಿ ಸಂಘಟನೆ-ಬದುಕು-ಬೆಳಕು-ದರ್ಶನ-ಮಾರ್ಗದರ್ಶನ-ಬರವಣಿಗೆ-ಮಾತುಗಾರಿಕೆ-ಛಲಗಾರಿಕೆ ಮನಸ್ಸುಗಳನ್ನು ಕಟ್ಟುವ, ಕದಡಿದ ಮನಸ್ಸುಗಳನ್ನು ಬೆಸೆಯುವ, ಬೆಸೆದ ಮನಸ್ಸುಗಳನ್ನು ಬಲಗೊಳಿಸುವ, ಕಟ್ಟಿದ ಮನಸ್ಸುಗಳನ್ನು ಭದ್ರಪಡಿಸುವ, ಭದ್ರಗೊಂಡ ಮನಸ್ಸುಗಳನ್ನು ವೀರಭದ್ರನಂತೆ ಪರಿವರ್ತಿಸುವ ಈ ಶತಮಾನದ ಅಭಿನವ ರೇಣುಕರು, ಹಸನ್ಮುಖದೊಂದಿಗೆ ಹರುಷಯುಕ್ತ-ದೋಷಮುಕ್ತ ಬದುಕು ಕರುಣಿಸಿದ ಕಾರುಣ್ಯ ಸಿಂಧು. ದೇಶ-ಕೋಶ-ಭಾಷೆ-ಗಡಿಗಳ ವಿಚಾರ ಬಂದಾಗ ಮುಮೊದಲು ಎದುರಿಸಿ ಧ್ವನಿಎತ್ತಿ ಎಚ್ಚರಿಸುವ, ಎಬ್ಬಿಸುವ, ಏಕೀರಣಗೊಳಿಸುವ ಏಕನಿಷ್ಠರು. ಧರ್ಮ-ಪರಂಪರೆಗಳ ವಿಷಯದಲ್ಲಿ ಅನ್ಯರ ಹಸ್ತಕ್ಷೇಪ ಬಾರದಂತೆ ಸರಿದೋಡಿಸುವ ಸಿಂಹಧ್ವಜ ಪತಾಕೆಯನ್ನೇರಿಸಿ, ನಂಬಿಕೆ-ವಿಶ್ವಾಸಗಳನ್ನು ಬ೦ದವರಿಗೆ. ಧರ್ಮ-ಸಂಸ್ಕತಿಗಳ ನಿಲುವನ್ನಿರಿಸಿಕೊಂಡವರಿಗೆ ನಿತ್ಯದಲ್ಲೂ ನಿಜತ್ವದ ಹೆದ್ದಾರಿಯನ್ನು ಸರಳಗೊಳಿಸಿ ಕರುಳಿನ ಬಾಂಧವ್ಯದಾಶೀರ್ವಾದವನ್ನು ದೊರಕಿಸುವ ಅಗಣಿತ ಕಾರ್ಯದ ಕರ್ತವ್ಯವೆಂದರಿತ ಕರ್ತಾರರು.

Phone

082662 50424

VISIT

6 am to 8 pm

Email

nanchinsdigital@gmail.com

Address

Rambhapuri Mutt Road, Narasimharajapura, Taluka, Balehonnur, Karnataka 577112